ದೋಸೆ. ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಅದರಲ್ಲೂ ದಕ್ಷಿಣ ಭಾರತದ ಪ್ರತಿಯೊಂದು ಮನೆಗಳಲ್ಲೂ ಬೆಳಗ್ಗಿನ ಉಪಹಾರಕ್ಕೆ ಮಾಡಲಾಗುವ ಸಾಮಾನ್ಯ ತಿಂಡಿ ಇದು. ಇನ್ನು ಹೋಟೆಲ್‌ಗಳ ಕಥೆಯಂತೂ ಕೇಳುವುದೇ ಬೇಡ. ಇಲ್ಲಿನ ಪ್ರತಿಯೊಂದು ಹೋಟೆಲ್‌ಗಳಲ್ಲೂ ಬೆಳಗ್ಗಿನಿಂದ ಸಂಜೆವರೆಗೂ ಲಭ್ಯವಿರುವ ತಿಂಡಿ ಎಂದಾದರೆ ಅದು ದೋಸೆ. ಮೊದಲೆಲ್ಲಾ ಉಪಹಾರಕ್ಕೆ ಮಾತ್ರ ಸೇವಿಸಲಾಗುತ್ತಿದ್ದ ದೋಸೆಯ ಸೇವನೆಗೆ ಇಂದು ಸಮಯದ ಮಿತಿ ಇಲ್ಲ. ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಇದು ನೆಚ್ಚಿನ ಆಹಾರ ಎಂದರೆ ತಪ್ಪಾಗಲಾರದು. ದೋಸೆ ರುಚಿಯಲ್ಲಿ ಮಾತ್ರವಲ್ಲ ತಯಾರಿಕೆಗೂ ಬಹಳ ಸುಲಭ. ಹಾಗಾದ್ರೆ ಇದನ್ನೇ ಬ್ಯುಸಿನೆಸ್ ಆಗಿ ಮಾಡಿಕೊಂಡರೆ! ಹೌದು ದೋಸೆ ಬ್ಯುಸಿನೆಸ್ ಈಗಾಗಲೇ ಫೇಮಸ್ ಆಗಿ ಬಹಳ ಕಾಲವಾಯ್ತು. ಅದರಲ್ಲೂ ಬೆಂಗಳೂರಿನಂತ ನಗರಗಳಲ್ಲಿ ಗಲ್ಲಿಗಲ್ಲಿಯಲ್ಲೂ ದೋಸೆ ಕ್ಯಾಂಟೀನ್ ಒಂದಾದರೂ ನೀವು ನೋಡಿಯೇ ನೋಡಿರುತ್ತೀರಿ. ಅದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ದೋಸೆ ಹಿಟ್ಟಿನ ಬ್ಯುಸಿನೆಸ್ ಕೂಡ ನಿಧಾನಕ್ಕೆ ಬೆಳೆಯುತ್ತಿದೆ. ಬ್ರಾಂಡೆಡ್ ದೋಸೆ ಹಿಟ್ಟುಗಳು ಅಂಗಡಿಗಳಲ್ಲಿ ಲಭ್ಯವಿದ್ದರೂ ಕೆಲವು ಜನ ಮನೆಯಲ್ಲೇ ತಯಾರಿಸುವ ದೋಸೆ ಹಿಟ್ಟುಗಳು ಹೆಚ್ಚಿನವರ ಕೆಲಸವನ್ನು ಇನ್ನಷ್ಟು ಸುಲಭ ಮಾಡಿದೆ.
ತಯಾರಿಸಲು ಸುಲಭ
ದೋಸೆ ತಯಾರಿ ಬಹಳ ಸುಲಭದ ಕೆಲಸ. ಬಹುಷಃ ಅದೇ ಕಾರಣಕ್ಕೆ ಬೆಂಗಳೂರಿನಂತಹ ಸಿಟಿಗಳಲ್ಲಿ ಲೆಕ್ಕವಿಲ್ಲದಷ್ಟು ದೋಸೆ ಕ್ಯಾಂಪ್ ಗಳು ತಲೆ ಎತ್ತಿರುವುದು. ಸಾದಾ ದೋಸೆಯಿಂದ ಹಿಡಿದು 99 ವೆರೈಟಿ ದೋಸೆಯವರೆಗೆ ವಿವಿಧ ಬಗೆಯ ದೋಸೆಗಳು ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾಗಿದೆ. ಮಸಾಲ ದೋಸೆ ಆಗಿನ ಕಾಲಕ್ಕೆ ಫೇಮಸ್ಸು, ಬೆಣ್ಣೆ ದೋಸೆ ಕೂಡ ಅಲ್ಲಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ರುಚಿ ಮತ್ತು ಸ್ವಾದಿಷ್ಟಕ್ಕೆ ಹೆಸರುವಾಸಿಯಾದ ತಿನಿಸು. ಇನ್ನು ಇದನ್ನು ಬಿಟ್ಟು ಈಗ ಬಹಳ ಪ್ರಸಿದ್ಧಿ ಎಂದರೆ 99 ವೆರೈಟಿ ದೋಸೆ. ಬಹಳಷ್ಟು ವೆರೈಟಿಗಳಲ್ಲಿ ಲಭ್ಯವಿರುವ ಈ ದೋಸೆ ಆರೋಗ್ಯಕರ ಮಾತ್ರವಲ್ಲದೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹಳ ಅಚ್ಚುಮೆಚ್ಚು. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತದ ಜನರು ಇಷ್ಟ ಪಟ್ಟು ತಿನ್ನುವ ಆಹಾರ ತಿನಿಸುಗಳಲ್ಲಿ ದೋಸೆಯೂ ಒಂದು ಎಂದರೆ ತಪ್ಪಾಗಲಾರದು.
ಹಲವು ವೆರೈಟಿಯಲ್ಲಿ ಲಭ್ಯ
ಜಗತ್ತಿನಲ್ಲಿರುವ ಎಲ್ಲಾ ತಿಂಡಿಗಳಿಗೆ ಹೋಲಿಸಿದರೆ ದೋಸೆಯಲ್ಲಿರುವಷ್ಟು ವೆರೈಟಿಗಳು ಬೇರೆ ಯಾವುದರಲ್ಲೂ ಕಾಣಸಿಗುವುದಿಲ್ಲ. ಸಾದಾ ದೋಸೆ, ಸೆಟ್ ದೋಸೆ, ಮಸಾಲ ದೋಸೆ, ನೀರ್ ದೋಸೆ, ಬೆಣ್ಣೆ ದೋಸೆ, ತುಪ್ಪ ದೋಸೆ, ನೀರುಳ್ಳಿ ದೋಸೆ, ಮಶ್ರೂಮ್ ದೋಸೆ, ಪನೀರ್ ದೋಸೆ, ಬೇಬಿ ಕಾರ್ನ್ ದೋಸೆ, ರವೆ ದೋಸೆ, ಗೋಧಿ ದೋಸೆ, ರಾಗಿ ದೋಸೆ ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ವೆರೈಟಿಗಳು ದೋಸೆಯಲ್ಲಿ ಲಭ್ಯವಿದೆ. ಕೆಲವರು ಅನಾರೋಗ್ಯಕರ ಮಸಾಲೆಗಳಿಗಿಂತ ಸಾಂಪ್ರದಾಯಿಕ ಮಸಾಲೆ, ಪಾಲಕ್, ಕ್ಯಾರೆಟ್, ನೀರುಳ್ಳಿ, ಓಟ್ಸ್ ಈ ರೀತಿಯ ಆಹಾರ ಪದಾರ್ಥಗಳನ್ನು ಬೆರೆಸಿಯೂ ದೋಸೆಯನ್ನು ತಯಾರಿಸುತ್ತಾರೆ. ಇನ್ನೂ ಕೆಲವೆಡೆ ಅಕ್ಕಿ ನೆನೆಸುವಾಗ ಓಟ್ಸ್ ರವೇ ಮತ್ತು ಚಿಯಾ ಬೀಜಗಳನ್ನೂ ಬೆರೆಸಿ ದೋಸೆ ತಯಾರಿಸುತ್ತಾರೆ ಇದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ದೊರಕುತ್ತದೆ ಎನ್ನಲಾಗುತ್ತದೆ.
ಎಣ್ಣೆಯ ಅಗತ್ಯ ಬಹಳ ಕಡಿಮೆ
ಇನ್ನು ದೋಸೆ ತಯಾರಿಕೆಗೆ ಹೆಚ್ಚಿನ ಎಣ್ಣೆಯ ಅಗತ್ಯವಿಲ್ಲ. ಹಿಟ್ಟು ಕಾವಲಿಗೆ ಅಂಟಬಾರದೆಂದು ಸ್ವಲ್ಪವೇ ಎಣ್ಣೆ ಸವರಲಾಗುತ್ತದೆ ಬಿಟ್ಟರೆ ಬೇರೆ ತಿಂಡಿ ಕರಿಯಲು ಬೇಕಾಗುವಷ್ಟು ಎಣ್ಣೆಯ ಅಗತ್ಯ ದೋಸೆಗೆ ಇಲ್ಲ. ತುಪ್ಪ ದೋಸೆ ಎಂದಾಗ ಅದಕ್ಕೆ ಹೆಚ್ಚು ತುಪ್ಪವನ್ನು ಹಚ್ಚಿ ದೋಸೆ ತಯಾರಿಸಲಾಗುತ್ತದೆ ಎನ್ನುವುದನ್ನು ಬಿಟ್ಟರೆ ಬೇರೆ ಎಲ್ಲಾ ದೋಸೆಗಳಿಗೂ ಎಣ್ಣೆಯ ಅಂಶ ಕಡಿಮೆಯೇ.
ನಿಮಗೆ ಗೊತ್ತೇ: ಎಣ್ಣೆ ಇಲ್ಲದೆ ತಯಾರಿಸಲಾಗುವ ಸಾದಾ ದೋಸೆ 112 ಕ್ಯಾಲೋರಿ ಹೊಂದಿದ್ದು, ಅದರಲ್ಲಿ 84% ಕಾರ್ಬೋಹೈಡ್ರೇಟ್ ಇದ್ದರೆ 16% ಪ್ರೊಟೀನ್ ಇದೆ.
ಆರೋಗ್ಯಕರ ಈ ದೋಸೆ
ದೋಸೆಯು ಆರೋಗ್ಯಕರ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಅನ್ನು ಹೊಂದಿದ್ದು ರುಚಿಕರ ಮಾತ್ರವಲ್ಲದೆ ದೇಹಕ್ಕೆ ಬೇಕಾದ ಎಲ್ಲಾ ಪೋಷಣೆಯನ್ನು ಒದಗಿಸುತ್ತದೆ. ಇದರಲ್ಲಿರುವ ಸ್ಯಾಚ್ಯುರೇಟೆಡ್ ಕೊಬ್ಬು ಆರೋಗ್ಯಕರವಾಗಿದ್ದು ಅತ್ಯುತ್ತಮ ಬೆಳಗ್ಗಿನ ಉಪಹಾರವಾಗಿದೆ. ದೋಸೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಹಾಗಾಗಿ ದೋಸೆ ನಿಮಗೆ ತ್ವರಿತ ಶಕ್ತಿಯನ್ನು ನೀಡುವ ಆಹಾರ ಎಂದು ಪರಿಗಣಿಸಲಾಗಿದೆ.
ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ- ದೋಸೆಯನ್ನು ತಯಾರಿಸಲು ಉದ್ದಿನ ಬೇಳೆ ಅನ್ನು ಬಳಸಲಾಗುತ್ತದೆ. ವಾಸ್ತವವಾಗಿ ಉದ್ದಿನ ಬೇಳೆ ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ ಹಾಗಾಗಿ ಬೆಳಗ್ಗಿನ ತಿಂಡಿಗೆ ಮಾತ್ರವಲ್ಲದೆ ಯಾವಾಗ ಬೇಕಾದರೂ ತಿನ್ನುವ ತಿನಿಸು ಈ ದೋಸೆ.
ದೋಸೆ ಬ್ಯುಸಿನೆಸ್ ಎಷ್ಟು ಲಾಭಕಾರಕ?
ಬೇರೆಲ್ಲಾ ಫುಡ್ ಬ್ಯುಸಿನೆಸ್ ಗಳಿಗೆ ಹೋಲಿಸಿದ್ರೆ ದೋಸೆ ಬ್ಯುಸಿನೆಸ್ ತುಂಬಾ ಲಾಭದಾಯಕ. ಯಾಕಂದ್ರೆ ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸಬಹುದು. ಈ ಬ್ಯುಸಿನೆಸ್ ಗೆ ಬೇಕಾಗುವುದು ಕೆಲವೊಂದಿಷ್ಟು ವಸ್ತುಗಳು, ದೋಸೆ ಹುಯ್ಯಲು ಕೌಶಲ್ಯ.
ದೋಸೆ ಹಿಟ್ಟು ಬ್ಯುಸಿನೆಸ್
ಇಂದಿನ ಬ್ಯುಸಿ ಲೈಫ್ ನಲ್ಲಿ ಹೆಚ್ಚಿನ ಜನ ಸುಲಭ ವಿಧಾನಗಳತ್ತ ಮೊರೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಅಡುಗೆ ವಿಷಯಕ್ಕೆ ಬಂದಾಗ ಮಾರ್ಕೆಟ್ ಗಳಲ್ಲಿ ಇನ್ಸ್ಟಂಟ್ (ಫಟಾ ಫಟ್) ತಯಾರಿಸುವ ಆಹಾರಗಳು ಲಭ್ಯವಿದೆ. ಇನ್ನು ದೋಸೆ ವಿಷಯಕ್ಕೆ ಬಂದರೆ ಸಮ ಪ್ರಮಾಣದಲ್ಲಿ ಹಿಟ್ಟು ತಯಾರಿಸಲು ಬೇಕಾದ ವಸ್ತುಗಳನ್ನು ಹಿಂದಿನ ದಿನ ನೆನೆಸಿಟ್ಟು, ಕಡೆದು ಮಾಡುವುದು ಕೆಲಸಕ್ಕೆ ಹೋಗುವ ಜನರಿಗೆ ಕಷ್ಟವೇ ಸರಿ. ಹಿಟ್ಟಿನಿಂದ ಹಿಡಿದು ಪುಡಿಯವರೆಗೆ ಬಹಳಷ್ಟು ವೆರೈಟಿಗಳು ಈಗ ಲಭ್ಯವಿರುವಾಗ ಕೇವಲ ಐದು ನಿಮಿಷಗಳಲ್ಲಿ ಗರಿ ಗರಿ ದೋಸೆ ತಯಾರಾಗಿಬಿಡುತ್ತದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ತರಹೇವಾರು ಬ್ರಾಂಡ್‌ಗಳು ಲಭ್ಯವಿದೆ ಇನ್ನು ಮನೆಯಲ್ಲಿ ತಯಾರಿಸುವ ಹಿಟ್ಟುಗಳು ಮಾರಾಟವಾಗುತ್ತವೆಯೇ ಎನ್ನುವ ಚಿಂತೆ ನಿಮ್ಮನ್ನು ಕಾಡಬಹುದು. ಚಿಂತಿಸುವ ಅಗತ್ಯವಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೆ ಮಾರ್ಕೆಟ್ ಗಳಲ್ಲಿ ಲಭ್ಯವಿರುವ ವಸ್ತುಗಳು ಆರೋಗ್ಯಕರವಲ್ಲ ಅನ್ನುವ ಯೋಚನೆ ಹೆಚ್ಚಿನ ಜನರ ಮನಸಿನಲ್ಲಿದೆ. ಹಾಗಾಗಿ ಆರ್ಗ್ಯಾನಿಕ್ ಆಹಾರ ವಸ್ತುಗಳ ಮೊರೆ ಹೋಗುವವರ ಸಂಖ್ಯೆ ಈಗ ಹೆಚ್ಚಾಗಿದೆ.
ದೋಸೆ ಹಿಟ್ಟು ತಯಾರಿ ಸುಲಭವೇ?
ಹೌದು, ಬೇರೆಲ್ಲಾ ತಿನಿಸುಗಳಿಗೆ ಹೋಲಿಸಿದರೆ ದೋಸೆ ಹಿಟ್ಟು ತಯಾರಿ ಬಹಳ ಸುಲಭ. ಇಡ್ಲಿ ಅಕ್ಕಿ, ಸ್ವಲ್ಪ ಮೆಂತ್ಯ, ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ ನೆನೆಯಲು ಇಡೀ. ೫ ರಿಂದ ೮ ಗಂಟೆಯ ಬಳಿಕ ಅದನ್ನು ಮೃದು ಹಿಟ್ಟಾಗಿ ಅರೆಯಿರಿ/ಕಡೆಯಿರಿ. ಇದನ್ನು ೮ ಗಂಟೆಗಳ ಕಾಲ ಇಟ್ಟರೆ ಹುದುಗುವ ಪ್ರಕ್ರಿಯೆ ಮುಗಿದ ಬಳಿಕ ದೋಸೆ ಹಿಟ್ಟು ತಯಾರಿಗೆ ರೆಡಿಯಾಗುತ್ತದೆ. ಇನ್ನು ತ್ವರಿತ ಹಿಟ್ಟು ತಯಾರಿಕೆಗೆ ನೀವು ಮೊಸರು ಸೇರಿಸಬಹುದು. ಅಥವಾ ಯೀಸ್ಟ್ ಸೇರಿಸಬಹುದು ಅಥವಾ ಬೇಕಿಂಗ್ ಸೋಡಾ ಬಳಸಬಹುದು.
ದೋಸೆ ಅಥವಾ ದೋಸೆ ಹಿಟ್ಟು ಬ್ಯುಸಿನೆಸ್ ಗೆ ಪೂರ್ವ ತಯಾರಿ ಹೇಗೆ?
- ಮಾರ್ಕೆಟ್ ಅನ್ವೇಷಣೆ: ಯಾವುದೇ ಬ್ಯುಸಿನೆಸ್ ಆರಂಭಕ್ಕೂ ಮುನ್ನ ಮಾರ್ಕೆಟ್ ಅನ್ವೇಷಣೆ ಬಹಳ ಮುಖ್ಯ. ಇವುಗಳ ಬಗ್ಗೆ ಮಾಹಿತಿ ಇಲ್ಲದೆ ನೀವು ಬ್ಯುಸಿನೆಸ್ ಗೆ ಕಾಲಿಡುವುದು ದುಸ್ಸಾಹಸವೇ ಸರಿ. ಹೀಗಾಗಿ ಯಾವುದೇ ಬ್ಯುಸಿನೆಸ್ ಆದರೂ ಸರಿ ಈ ವಿಷಯಗಳ ಬಗ್ಗೆ ಗಮನ ವಹಿಸುವುದು ಬಹಳ ಮುಖ್ಯ. ನೀವು ಆಯ್ಕೆ ಮಾಡುವ ಸ್ಥಳದಲ್ಲಿರುವ ಜನರು ಹೇಗೆ, ಈಗಾಗಲೇ ಅಲ್ಲಿರುವ ಅಂಗಡಿಗಳು ಯಾವುದು, ಜನ ಯಾವ ಆಹಾರದ ಶಾಪ್ ಗೆ ಹೆಚ್ಚು ಭೇಟಿ ನೀಡುತ್ತಾರೆ, ಅಲ್ಲಿ ಸಿಗುವ ಆಹಾರಗಳು ಯಾವುದು, ಆಹಾರದ ಗುಣಮಟ್ಟ ಹೇಗಿದೆ, ಬೆಲೆ ಹೇಗಿದೆ, ಯಾವ ಆಹಾರದ ಜೊತೆ ಯಾವ ಇತರ ಐಟಂಗಳನ್ನು ಮಾರಾಟಕ್ಕಿಟ್ಟರೆ ಒಳ್ಳೆಯದು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
- ಸ್ಥಳ ಆಯ್ಕೆ:ದೋಸೆ ವ್ಯಾಪಾರ ಮಾಡುವ ಮುನ್ನ ಸ್ಥಳವನ್ನು ಬಹಳ ಎಚ್ಚರಿಕೆಯಿಂದ ಆರಿಸಬೇಕು. ಜನ ಹೆಚ್ಚಿರುವ ಪ್ರದೇಶದ ಆಯ್ಕೆ ನಿಮ್ಮ ಬ್ಯುಸಿನೆಸ್ ಅನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಶಾಲೆ, ಕಾಲೇಜು, ಕಚೇರಿಗಳು ಇರುವ ಜಾಗಗಳು ವೆರೈಟಿ ದೋಸೆ ಬ್ಯುಸಿನೆಸ್ ಗೆ ಸಹಾಯಕಾರಿ. ಆದಷ್ಟು ಮಾಲ್, ದೊಡ್ಡ ಐಟಿ ಕಂಪೆನಿಗಳಿಂದ ದೂರವಿದ್ದರೆ ಒಳಿತು. ಯಾಕಂದ್ರೆ ಇಲ್ಲಿ ಜನರು ಸಣ್ಣ ಅಂಗಡಿಗಳಿಗಿಂತ ಫುಡ್ ಕೋರ್ಟ್ ಗಳಿಗೆ ಹೋಗುವ ಸಾಧ್ಯತೆ ಬಹಳ ಹೆಚ್ಚು.
- ಗುಣಮಟ್ಟ: ಎಲ್ಲಕ್ಕಿಂತಲೂ ಹೆಚ್ಚಾಗಿ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಗುಣಮಟ್ಟ ಚೆನ್ನಾಗಿರದಿದ್ದರೆ ಬೆಲೆ ಕಡಿಮೆಯಿದ್ದರೂ ಜನರನ್ನು ನಿಮ್ಮ ಅಂಗಡಿಗೆ ಸೆಳೆಯುವುದು ಬಹಳ ಕಷ್ಟ. ಇಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನರ ಅಭಿಪ್ರಾಯಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ಒಬ್ಬರು ನಿಮ್ಮ ಆಹಾರವನ್ನು ಬಹಳಷ್ಟು ನೆಚ್ಚಿಕೊಂಡರೆ ನಾಳೆ ಅವರು ಇನ್ನೂ ಇಬ್ಬರನ್ನು ಕರೆತರಬಹುದು. ಸಣ್ಣ ಶಾಪ್ ಆಗಿರುವುದರಿಂದ ಯಾವುದೇ ಜಾಹೀರಾತುಗಳ ಅವಶ್ಯಕೆತೆಯಿಲ್ಲದೆ ನಿಮ್ಮ ಶಾಪ್ ಕೆಲವೇ ದಿನಗಳಲ್ಲಿ ಫೇಮಸ್ ಆಗಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗದಂತೆ ನೋಡಿಕೊಳ್ಳಿ. ಬೆಲೆ ಕೊಂಚ ದುಬಾರಿಯಾದರೂ ಸರಿ ಗುಣಮಟ್ಟ ಕಳಪೆಯಾಗಿರಬಾರದು.
- ಪೀಠೋಪಕರಣಗಳ ಖರೀದಿ: ಇನ್ನು ಯಾವುದೇ ಬ್ಯುಸಿನೆಸ್ ಪ್ರಾರಂಭಿಸುವಾಗ ಅದಕ್ಕೆ ಬೇಕಾಗುವ ಪೀಠೋಪಕರಣಗಳ ವ್ಯವಸ್ಥೆ ಮಾಡುವುದು ಬಹಳ ಮುಖ್ಯ. ಇನ್ನು ದೋಸೆ ಬ್ಯುಸಿನೆಸ್ ಪ್ರಾರಂಭಿಸುವುದೆಂದರೆ ಸ್ವಲ್ಪ ಜನ ಕುಳಿತುಕೊಳ್ಳಲು ಕುರ್ಚಿ ಅಥವಾ ಬೆಂಚ್ ವ್ಯವಸ್ಥೆ, ನಿಂತು ತಿನ್ನುವುದಾದರೆ ಟೇಬಲ್ ವ್ಯವಸ್ಥೆ, ದೋಸೆ ತಯಾರಿಸಲು ಬೇಕಾಗುವ ತವಾ ಅಥವಾ ಕಾವಲಿ, ಗ್ಯಾಸ್, ಸಿಲಿಂಡರ್ ವ್ಯವಸ್ಥೆ, ಮಿಕ್ಸಿ ಅಥವಾ ಗ್ರೈಂಡರ್, ನೀರಿನ ವ್ಯವಸ್ಥೆ (ಕುಡಿಯುವ/ಕೈ ತೊಳೆಯಲು) ಮಾಡಿಕೊಳ್ಳುವುದು ಕೂಡ ಅಗತ್ಯವಾದದ್ದು.
- ಕಚ್ಚಾ ಸಾಮಗ್ರಿಗಳು:
ಇನ್ನು ದೋಸೆ ಮತ್ತು ದೋಸೆ ಹಿಟ್ಟು ಬ್ಯುಸಿನೆಸ್ ಗೆ ಕಚ್ಚಾ ಸಾಮಗ್ರಿಗಳು ಬಹಳ ಮುಖ್ಯ. ದೋಸೆ ಹಿಟ್ಟು ತಯಾರಿಸಲು ಬೇಕಾಗುವ ಅಕ್ಕಿ, ಉದ್ದು, ಮೆಂತ್ಯ, ಉಪ್ಪು ಜೊತೆಗೆ ತಿನ್ನಲು ಬೇಕಾಗುವ ತಟ್ಟೆ, ಚಟ್ನಿ ಅಥವಾ ಸಾಂಬಾರ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು, ತೊಳೆಯಲು ಸುಲಭವಾಗಲು ಬಾಳೆ ಎಲೆ ಬಳಸುವುದಾದರೆ ಬಾಳೆ ಎಲೆ ಕೂಡ ಬೇಕಾಗುತ್ತದೆ. ಇನ್ನು ಪಾರ್ಸೆಲ್ ಕೊಂಡು ಹೋಗುವವರಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು ಅವಶ್ಯಕ. ಪಾರ್ಸೆಲ್ ತಲುಪುವವರೆಗೆ ಯಾವುದೇ ಸೋರಿಕೆಯಾಗದಂತೆ ಅತ್ಯುತ್ತಮ ಪ್ಯಾಕೇಜಿಂಗ್ ಒದಗಿಸಿಕೊಟ್ಟರೆ ಗ್ರಾಹಕರೂ ಖುಷಿಯಾಗಿರುತ್ತಾರೆ.
6. ಕೆಲಸಕ್ಕೆ ಜನ: ಇನ್ನು ಕೆಲಸಕ್ಕೆ ಜನ. ಅದು ಸಣ್ಣ ಬ್ಯುಸಿನೆಸ್ ಆಗಿರಲಿ ಸಹಾಯಕರ ಅಗತ್ಯ ಬಹಳ ಮುಖ್ಯ. ಅದರಲ್ಲೂ ಫುಡ್ ಸಂಬಂಧಿತ ಬ್ಯುಸಿನೆಸ್ ಪ್ರಾರಂಭಿಸುವಾಗ ನಿಮಗೆ ಸಹಾಯಕರು ಬೇಕೇ ಬೇಕು. ದೋಸೆ ಹಿಟ್ಟು ರೆಡಿ ಮಾಡೋದು ಆದ್ರೂ ಬಹಳ ದೊಡ್ಡ ಪ್ರಮಾಣದಲ್ಲಿ ಮಾಡುವಾಗ ಸಹಾಯಕರು ಇದ್ದರೆ ನಿಮ್ಮ ಕೆಲಸ ಸಲೀಸಾಗುತ್ತೆ. ಇನ್ನು ದೋಸೆ ತಯಾರಿಸುವ ಕೆಲಸಕ್ಕಾದರೂ ಇನ್ನೊಬ್ಬರು ಜೊತೆಗಿದ್ದರೆ ಉತ್ತಮ. ಇನ್ನು ತರಕಾರಿ ಕಟ್ ಮಾಡೋಕೆ, ಪಾರ್ಸೆಲ್ ಗಳನ್ನು ಕಟ್ಟಿ ಕೊಡೋದಕ್ಕೆ ಒಬ್ಬರು ಸಹಾಯಕರಿದ್ದಾರೆ ಕೆಲಸ ಬೇಗ ಮುಗಿದು ಬಿಡುತ್ತೆ. ಗ್ರಾಹಕರು ಕಾಯುವ ಗೋಜು ಇರೋದಿಲ್ಲ.
ಪರವಾನಗಿಗಳು
ಭಾರತ ಸರ್ಕಾರದ ನಿಯಮಗಳು ಮತ್ತು ಕಾನೂನುಗಳ ಪ್ರಕಾರ, ಪ್ರತಿ ಫುಡ್ ಬ್ಯುಸಿನೆಸ್ ಲೈಸೆನ್ಸ್ ಹೊಂದಿರಬೇಕು. ಒಂದು ವೇಳೆ ಅಗತ್ಯ ಪರವಾನಗಿಗಳನ್ನು ಇಲ್ಲದಿದ್ದರೆ, ಮಾಲಕರರು ದಂಡ ಪಾವತಿಸಬೇಕಾಗುತ್ತದೆ.
ಯಾವೆಲ್ಲ ಪರವಾನಗಿಗಳು ಅಗತ್ಯ?
- FSSAI
- ಹೆಲ್ತ್/ಟ್ರೇಡ್ ಲೈಸೆನ್ಸ್
- ಈಟಿಂಗ್ ಹೌಸ್ ಲೈಸೆನ್ಸ್
- ಶಾಪ್ ಮತ್ತು ಎಸ್ಟೇಬಳಿಶ್ಮೆಂಟ್ ಲೈಸೆನ್ಸ್
- NOC (ನೀವು ನಿಮ್ಮ ವ್ಯಾಪಾರವನ್ನು 11 PM ನಂತರ ತೆರೆಯಬೇಕಾದರೆ)
ದೋಸೆ ಹಿಟ್ಟನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಹೇಗೆ?
ದೋಸೆ ಬ್ಯುಸಿನೆಸ್ ಗೆ ಬೇಕಾದ ಎಲ್ಲಾ ತಯಾರಿಯೂ ಆಯ್ತು. ಈಗ ಹಿಟ್ಟನ್ನು ಸಂಗ್ರಹಿಸುವುದು ಹೇಗೆ? ಸ್ವಲ್ಪ ಪ್ರಮಾಣದಲ್ಲಿ ತಯಾರಿಸುವಾಗ ಸಂಗ್ರಹಿಸೋದು ಬಹಳ ಸುಲಭ. ದೊಡ್ಡ ಪ್ರಮಾಣದಲ್ಲಿ ತಯಾರಿಸುವಾಗ ಸಂಗ್ರಹ ಮಾಡುವುದೇ ದೊಡ್ಡ ಚಿಂತೆ. ಬಳಕೆಯಾಗಿ ಉಳಿದ ಹಿಟ್ಟನ್ನು ನೀವು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡಬಹುದು.
ದೋಸೆ ತಯಾರಿಸಲು ಆಗುವ ವೆಚ್ಚ
ಕಚ್ಚಾ ವಸ್ತುಗಳು, ದೋಸೆ ಹಿಟ್ಟು, ಮಸಾಲೆ, ಎಣ್ಣೆ, ಗ್ಯಾಸ್, ಕೆಲಸಗಾರರ ವೇತನ ಹೀಗೆ ಇವೆಲ್ಲಾ ಖರ್ಚುಗಳನ್ನು ಅಳೆದು ತೂಗಿ ನಿಮ್ಮ ಲಾಭವನ್ನು ಲೆಕ್ಕ ಹಾಕಬಹುದು. ನಿಮಗೆ ಇದರ ಸರಿಯಾದ ಲೆಕ್ಕ ಸಿಗಲು, ಮೊದಲಿಗೆ ಕಡಿಮೆ ಪ್ರಮಾಣದಿಂದ ಆರಂಭಿಸಿ ಹೆಚ್ಚು ಪ್ರಮಾಣದಲ್ಲಿ ಮುಂದುವರೆಸಬಹುದು.
ದೋಸೆಯನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು. ಹೀಗಾಗಿ ಇದು ದಿನದ ಯಾವುದೇ ಸಮಯದಲ್ಲಿ ಲಭ್ಯವಿರುತ್ತದೆ. ಇನ್ನು ಬೇರೆ ಆಹಾರದ ಹಾಗೆ ಕೂಡಲೇ ಇದು ಹಾಳಾಗುತ್ತದೆ ಎಂದಲ್ಲ. ದೋಸೆ ಹಿಟ್ಟು ಮಾಡಿಕೊಂಡರೆ ಒಂದರಿಂದ ಎರಡು ದಿನಗಳವರೆಗೆ ಬಳಸಬಹುದು. ಮೂರನೆಯ ದಿನದಿಂದ ಇದು ಕೊಂಚ ಹುಳಿ ಬರಲು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಹಸಿವು ನೀಗಿಸಲು ಮಾತ್ರವಲ್ಲ, ಸುಲಭ ತಯಾರಿಕೆಗೂ ದೋಸೆ ಹೆಸರುವಾಸಿ. ಇನ್ನು ವಿವಿಧ ಬಗೆಯ ಚಟ್ನಿಗಳು ದೋಸೆಯ ಜೊತೆಗೆ ಉತ್ತಮ ಕಾಂಬಿನೇಷನ್. ಅದರ ಜೊತೆಗೆ ಆಲೂಗಡ್ಡೆಯನ್ನು ತಯಾರಿಸಿ ಏನಾದರೂ ಸೈಡ್ ಡಿಶ್ ಕೊಟ್ಟರೆ ಒಳ್ಳೆಯದು. ತಿನ್ನಲು ರುಚಿಕರವಾಗಿರುವುದರ ಜೊತೆಗೆ ಜನರನ್ನು ಹೆಚ್ಚು ನಿಮ್ಮ ಶಾಪ್ ನತ್ತ ಸೆಳೆಯಬಹುದು.
ಮಾರ್ಕೆಟಿಂಗ್
ನೀವು ಅದ್ಭುತವಾದದ್ದನ್ನು ಪ್ರಾರಂಭಿಸಲು ಹೊರಟಿದ್ದೀರಿ, ಹಾಗಾಗಿ ಅದಕ್ಕೆ ಜಾಹೀರಾತು ಮಾರ್ಕೆಟಿಂಗ್ ಕೂಡ ಬಹಳ ಮುಖ್ಯವಾಗುತ್ತದೆ? ರಸ್ತೆ ಬದಿ ಅಂಗಡಿ ಇಡುವುದಾದರೆ ಹೆಚ್ಚಿನ ಮಾರ್ಕೆಟಿಂಗ್ ಅಗತ್ಯವಿಲ್ಲ ಆದರೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಇಡುವುದಾದರೆ ಖಂಡಿತ ಮಾರ್ಕೆಟಿಂಗ್ ಬಹಳ ಮುಖ್ಯ. ಒಂದು ಅದ್ಭುತ ಲೋಗೋ ವಿನ್ಯಾಸ, ನಿಮ್ಮ ವ್ಯಾಪಾರವನ್ನು ಸಮರ್ಥಿಸುವ ಉತ್ತಮ ಅಡಿಬರಹ ಮತ್ತು ಇತರ ಬ್ರ್ಯಾಂಡಿಂಗ್ ಪ್ರಚಾರಗಳನ್ನು ನಿರ್ವಹಿಸಬಹುದು.
ಗ್ರಾಹಕರನ್ನು ಆಕರ್ಷಿಸಲು ಮತ್ತು ನಿಮ್ಮ ಶಾಪ್ ಕಡೆಗೆ ಜನವನ್ನು ಹೆಚ್ಚು ಆಕರ್ಷಿಸಲು ನೀವು ಭೌತಿಕ ಮತ್ತು ಆನ್‌ಲೈನ್ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಬಹುದು. ರಿಯಾಯಿತಿಗಳು, ಕೂಪನ್‌ಗಳು ಮತ್ತು ಆಸಕ್ತಿದಾಯಕ ಕೊಡುಗೆಗಳನ್ನು ನೀಡುವುದರಿಂದ ನಿಮ್ಮ ಬ್ಯುಸಿನೆಸ್ ಆರಂಭದಲ್ಲಿ ಸ್ವಲ್ಪ ಉತ್ತಮ ಗಮನವನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು.
ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅನ್ನು ಹೊಂದಿರುವುದು ಗ್ರಾಹಕ ಸೇವೆಗೆ ಮೌಲ್ಯವನ್ನು ಸೇರಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಅಥವಾ ಮುಂಚಿತವಾಗಿ ಟೇಬಲ್‌ಗಳನ್ನು ಬುಕ್ ಮಾಡಲು ಅನುಕೂಲವನ್ನು ನೀಡುತ್ತದೆ. ಜೊತೆಗೆ ಇತರ ಫುಡ್ ಡೆಲಿವರಿ ಆಪ್ ಗಳ ಜೊತೆಗೆ ಟೈ ಅಪ್ ಕೂಡ ಮಾಡಬಹುದು. ಆದರೆ ಇದಕ್ಕೆ ನೀವೊಬ್ಬ ಸಹಾಯಕರನ್ನು ಅದಕ್ಕೆಂದೇ ಇಟ್ಟುಕೊಂಡರೆ ಒಳಿತು, ಕೆಲಸ ವೇಗವಾಗುವುದರ ಜೊತೆಗೆ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.
ಉಪಸಂಹಾರ
ಸೌತ್ ಇಂಡಿಯನ್ ಆಹಾರಗಳಲ್ಲಿ ಇಡ್ಲಿಯನ್ನು ಹೊರತುಪಡಿಸಿ ಬಹಳ ಫೇಮಸ್ ಆಗಿರುವ ದೋಸೆ ಬ್ಯುಸಿನೆಸ್ ಗೆ ಹೇಳಿ ಮಾಡಿಸಿದ ಆಹಾರ ಪದಾರ್ಥಗಳಲ್ಲಿ ಒಂದು. ದೋಸೆ ಮಾತ್ರವಲ್ಲ ಈಗ ಅದರ ಹಿಟ್ಟು ಬ್ಯುಸಿನೆಸ್ ಕೂಡ ಬಹಳ ಚೆನ್ನಾಗಿ ಕೈ ಹಿಡಿಯುತ್ತಿದೆ. ಮನೆಯಲ್ಲೇ ಕುಳಿತು ಈ ಬ್ಯುಸಿನೆಸ್ ನಿಂದ ಹೆಚ್ಚಿನ ಹಣ ಗಳಿಸಬಹುದು. ಅದಕ್ಕೆ ಬೇಕಾಗುವ ಸಾಮಗ್ರಿಗಳು ಕೂಡ ಕಡಿಮೆ ವೆಚ್ಚದಲ್ಲಿ ಸಿಗುವವು. ಹಾಗಾಗಿ ನೀವು ಯಾವುದಾದರೂ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿ ಇದ್ದರೆ, ಸುಲಭ ವಿಧಾನಗಳಿಗಾಗಿ ಹುಡುಕುತ್ತಿದ್ದರೆ ಇದು ನಿಮಗೆ ಹೇಳಿ ಮಾಡಿಸಿದ ಬ್ಯುಸಿನೆಸ್ ಗಳಲ್ಲಿ ಒಂದು. ಹಾಗಾದ್ರೆ ತಡ ಯಾಕೆ ಇಂದೇ ಪ್ಲ್ಯಾನ್ ಮಾಡಲು ಶುರು ಮಾಡಿ.
ಇತ್ತೀಚಿನ ಅಪ್ ಡೇಟ್, ಸುದ್ದಿ ಬ್ಲಾಗ್‌ಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (MSMEಗಳು), ವ್ಯಾಪಾರ ಸಲಹೆಗಳು, ಆದಾಯ ತೆರಿಗೆ, GST, ಸಂಬಳ ಮತ್ತು ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದ ಲೇಖನಗಳಿಗಾಗಿ Khatabook ಫಾಲೋ ಮಾಡಿ.